ವೀರಣ್ಣಗೌಡ, ಎಚ್ ಕೆ
	1899-1976. ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸಚಿವರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿ 1899 ಮೇ 1ರಂದು ಜನಿಸಿದರು. ಇವರ ಪೂರ್ವಿಕರಾದ ಹೋಬಳಿ ವೀರಣ್ಣಗೌಡರೆಂಬವರು ಶಿಸ್ತಿಗೆ ಹೆಸರಾಗಿದ್ದವರು. ಅವರ ಪ್ರಭಾವ ಎಚ್.ಕೆ.ವೀರಣ್ಣಗೌಡರ ಮನೆತನದ ಮೇಲಾಗಿತ್ತು. ಹೀಗಾಗಿ ವೀರಣ್ಣಗೌಡರ ಮನೆತನದವರನ್ನು ಈಗಲೂ ಹೋಬಳಿ ವೀರಣ್ಣಗೌಡರ ಮನೆಯವರು ಎಂದೇ ಕರೆಯುತ್ತಾರೆ.

	ಇವರ ಆರಂಭದ ಓದು ಮನೆಯಲ್ಲಿಯೇ ಪ್ರಾರಂಭವಾಯಿತು. ಅಕ್ಕೂರು, ಚನ್ನಪಟ್ಟಣಗಳಲ್ಲಿ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣ ಪಡೆದರು. ವಿದ್ಯಾರ್ಥಿದೆಸೆಯಲ್ಲಿಯೇ ಇವರಲ್ಲಿ ಗಾಢ ಸಾಮಾಜಿಕ ಪ್ರಜ್ಞೆ ಬೇರೂರಿತ್ತು. ಚನ್ನಪಟ್ಟಣ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಇವರಿಗೆ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿದ್ದ ಅನೇಕ ಹಿರಿಯರ ಸಂಪರ್ಕ ದೊರೆಯಿತು; ರಾಜ್ಯದ ಹೊರಗೆ ಪ್ರವಾಸ ಮಾಡುವ ಅವಕಾಶಗಳೂ ಒದಗಿದುವು. ಅದೇ ಸಮಯದಲ್ಲಿ ಚನ್ನಪಟ್ಟಣದಲ್ಲಿ ತಮ್ಮ ಮಿತ್ರರೊಡನೆ ಸೇರಿ ಒಕ್ಕಲಿಗರ ವಿದ್ಯಾರ್ಥಿ ಸಂಘವನ್ನು, ಒಕ್ಕಲಿಗರ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದರು. ಸ್ಕೌಟ್ ಚಳವಳಿ, ಸಮಾಜಸೇವೆ, ಕರ್ಣಾಟಕ ವಿದ್ಯಾರ್ಥಿ ಎಂಬ ದ್ವೈಮಾಸಿಕದ ಸಂಪಾದನೆ ಇವೇ ಮೊದಲಾದವು ಇವರ ಚೈತನ್ಯವನ್ನು ಅರಳಿಸಿದವು. ಮೈಸೂರು, ಬೆಂಗಳೂರುಗಳಲ್ಲಿ ಉನ್ನತ ಶಿಕ್ಷಣ ಪಡೆದ ಇವರು ಚನ್ನಪಟ್ಟಣದಲ್ಲಿ ಸ್ವಲ್ಪ ಕಾಲ ಉಪಾಧ್ಯಾಯರಾಗಿ ಕೆಲಸ ಮಾಡಿದರು. ಆ ಸಮಯದಲ್ಲಿ ದೇ. ಜವರೇಗೌಡರ ಜೀವನದ ಮಹತ್ತರ ತಿರುವಿಗೆ ಕಾರಣರಾದರೆಂಬುದು ಉಲ್ಲೇಖನೀಯ.

	ಕನ್ನಡ ಪತ್ರಿಕೋದ್ಯಮ ಬೆಳೆವಣಿಗೆಗೆ ಇವರು ಸಲ್ಲಿಸಿದ ಕಾಣಿಕೆ ಗಣ್ಯವಾದುದು. ಬೆಂಗಳೂರು ಒಕ್ಕಲಿಗರ ಸಂಘದಲ್ಲಿ ಒಕ್ಕಲಿಗರ ಪತ್ರಿಕೆಯ ಸಂಪಾದಕರಾಗಿ ಇವರು ನಿರ್ವಹಿಸಿದ ಕೆಲಸ ಹಿರಿದು. 1928ರಲ್ಲಿ ಆ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಪ್ರಕಟಿಸಿ, ಕನ್ನಡ ಪತ್ರಿಕಾರಂಗಕ್ಕೊಂದು ಹೊಸದಾರಿ ಹಾಕಿಕೊಟ್ಟರು. ಈ ಪತ್ರಿಕೆಯ ವ್ಯವಸ್ಥಾಪಕರಿಗೂ ಇವರಿಗೂ ಮನಸ್ತಾಪ ಬಂದುದರಿಂದ ಒಕ್ಕಲಿಗರ ಪತ್ರಿಕೆಯನ್ನು ಬಿಟ್ಟು ಸ್ವತಂತ್ರವಾಗಿ 1928 ಡಿಸೆಂಬರ್‍ನಲ್ಲಿ ಚಿತ್ರಗುಪ್ತ (ನೋಡಿ- ಚಿತ್ರಗುಪ್ತ-2) ಎಂಬ ಪತ್ರಿಕೆಯನ್ನು ಆರಂಭಿಸಿ ಮೂರು ವರ್ಷಗಳ ಕಾಲ ನಡೆಸಿದರು.

	ಸಾಮಾಜಿಕ ಮೌಢ್ಯಗಳನ್ನು ಕಿತ್ತೊಗೆಯುವ ದೃಢವ್ಯಕ್ತಿತ್ವದ ಇವರು ವಿಧವಾ ವಿವಾಹವನ್ನು ಪ್ರೋತ್ಸಾಹಿಸಲು ತಾವೇ ಶಾಸ್ತ್ರೋಕ್ತವಾಗಿ ತಾಯಮ್ಮ ಎಂಬುವರೊಂದಿಗೆ 1931 ಮಾರ್ಚ್ 2ರಂದು ಮದುವೆಯಾದರು. 1932ರಲ್ಲಿ ನಡೆಸಿದ ಇರ್ವಿನ್ ನಾಲಾ (ಈಗ ವಿಶ್ವೇಶ್ವರಯ್ಯ ನಾಲೆ) ರೈತರ ಹೋರಾಟ ಇವರಿಗಿದ್ದ ಅದ್ಭುತ ಸಂಘಟನಾಶಕ್ತಿಗೆ ಸಾಕ್ಷಿ. ಮಂಡ್ಯ ಜಿಲ್ಲೆಯ ರೈತರ ಸಂಕಷ್ಟ ವಿಮುಕ್ತಿಗಾಗಿ ಆ ಕಾಲದಲ್ಲಿ ರೈತರ ಸಂಘಟನೆ ಮಾಡಿ ಬೆಂಗಳೂರಿಗೆ ಜಾತಾ ಹೊರಡಿಸಿದ್ದು ಇವರ ನೇತೃತ್ವದಲ್ಲಿಯೇ. ಈ ಜಾತಾ ಇಂದಿಗೂ ಐತಿಹಾಸಿಕ ಘಟನೆಯಾಗಿ ಮಹತ್ತ್ವದ ಸ್ಥಾನ  ಪಡೆದುಕೊಂಡಿದೆ; ಅಗ್ರೇರಿಯನ್ ರೆವಲೂಷನ್ ಎಂದು ಪ್ರಸಿದ್ಧವಾಗಿದೆ.

	ಇವರು ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಕಾಂಗ್ರೆಸ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು. 1934ರಲ್ಲಿ ಮೈಸೂರು ಜಿಲ್ಲಾ ಮಂಡಳಿಯ ಸದಸ್ಯರಾಗಿ ಸೇವೆಸಲ್ಲಿಸಿದ ಇವರು ಕೆಲವು ಕಾಲ ಮದ್ದೂರು ಪುರಸಭೆಯ ಅಧ್ಯಕ್ಷರೂ ಆಗಿದ್ದರು. ಆಗಿನ ಮೈಸೂರು ಸಂಸ್ಥಾನದಲ್ಲಿಯೇ ಮೊದಲನೆಯದಾದ ಶಿವಪುರದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನವನ್ನು ನಡೆಸಿದ ಕೀರ್ತಿ ಇವರದು. 1938ರ ಏಪ್ರಿಲ್ ತಿಂಗಳಲ್ಲಿ ಐತಿಹಾಸಿಕ ಧ್ವಜವಂದನೆ ಮತ್ತು ಆರೋಹಣ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಆಳುವ ಸರ್ಕಾರದ ವಿರೋಧದ ಮಧ್ಯೆಯೂ ಹಿಡಿದ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸುವ ಛಲ ಇವರಿಗಿತ್ತು. ಭಾರತ ಸ್ವಾತಂತ್ರ್ಯಸಂಗ್ರಾಮದಲ್ಲೂ ಭಾಗವಹಿಸಿ ಸೆರೆಮನೆ ಶಿಕ್ಷೆ ಅನುಭವಿಸಿದ ಇವರು ಸ್ವಾತಂತ್ರ್ಯಾನಂತರ ಮೈಸೂರು ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಮೂರು ಬಾರಿ (1947, 52 ಮತ್ತು 58) ಚುನಾಯಿತರಾದರು. 1956ರಲ್ಲಿ ಮೈಸೂರು ಸಂಸ್ಥಾನದ ವಿದ್ಯುಚ್ಛಕ್ತಿ ಮತ್ತು ಲೋಕೋಪಯೋಗಿ ಖಾತೆಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಅನಂತರ 1959ರಲ್ಲಿ ಮತ್ತೊಮ್ಮೆ ಸಾರಿಗೆ ಸಚಿವರಾಗಿ ಸೇವೆಸಲ್ಲಿಸಿದರು. 1962ರಲ್ಲಿ ಮೈಸೂರು ಶಾಸನ ಸಭೆಗಳಿಗೆ ನಡೆದ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋತು, 1964ರಲ್ಲಿ ಲೋಕಸಭಾಸದಸ್ಯರಾಗಿ ಆಯ್ಕೆಯಾದರು. ಬೆಂಗಳೂರಿನ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕೆಲಸಮಾಡಿದ ಇವರು ಆದಿಚುಂಚನಗಿರಿ ಮಠದ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನು ಸ್ವಲ್ಪಕಾಲ ನಿರ್ವಹಿಸಿದರು.  ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಮದ್ದೂರಿನಲ್ಲಿ ಕಮಲಾ ನೆಹರೂ ಬಾಲಿಕಾ ಪ್ರೌಢಶಾಲೆ ಮತ್ತು ಅರ್ಜುನಪುರಿ ಕಲೆ ಮತ್ತು ವಿಜ್ಞಾನ ಕಾಲೇಜು ಎಂಬ ಎರಡು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಬೆಳೆಸಿದರು.

	ಒಳ್ಳೆಯ ವಾಗ್ಮಿಗಳೂ ಲೇಖಕರೂ ಆಗಿದ್ದ ಇವರು ಕನ್ನಡದಲ್ಲಿ ಶಿವಾಜಿ ವಿಜಯ, ಬುದ್ಧದೇವ ಎಂಬ ಎರಡು ನಾಟಕಗಳನ್ನು ಬರೆದಿದ್ದಾರೆ.  ಬದುಕು-ಮೆಲುಕು ಎಂಬುದು ಇವರ ಆತ್ಮಕಥೆ. ಇವರು 1976 ಎಪ್ರಿಲ್ 7ರಂದು ನಿಧನರಾದರು.	
 (ಎಸ್.ಕೆ.ಕೆ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ